ಬಾರ್ಟೋಕ್, ಬೆ¯
1881-1945. ಹಂಗೇರಿಯ ಜನಪದ ಸಂಗೀತ ಕೋವಿದ. ಪಿಯಾನೊ ಮತ್ತು ಹಂಗೇರಿಯ ಪ್ರಾಕ್ತನ ಸಂಗೀತ ಸಂಶೋಧನೆ ಈತನ ವಿಶೇಷ ಆಸಕ್ತಿಗಳು. ಪಿಯಾನೊ ಜೊತೆಗೆ ಹಂಗೇರಿಯ ಜನಪದ ಸಂಗೀತವನ್ನು ಅಳವಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಇತರ ಸಂಗೀತ ವಿದ್ವಾಂಸರೊಡಗೂಡಿ ಹಂಗೇರಿ ಮತ್ತು ಅದರ ಅಕ್ಕಪಕ್ಕದ ದೇಶಗಳ ಜನಪದ ಸಂಗೀತ ಸಾಮಗ್ರಿ ಸಂಗ್ರಹಿಸಿ, ಸಂಸ್ಕರಿಸಿ ಶಾಸ್ತ್ರೀಯವಾಗಿ ವಿಂಗಡಿಸಿದ್ದಾನೆ. ಕೆಲವು ದೇಶಗಳ ಪ್ರಾದೇಶಿಕ ಸಂಗೀತ ಮಾದರಿಗಳ ಸಂಶೋಧನೆ ನಡೆಸಿದ್ದಾನೆ. ಬುಡಾಪೆಸ್ಟಿನ ರಾಯಲ್ ಸಂಗೀತ ಅಕಾಡೆಮಿಯಲ್ಲಿ ಪಿಯಾನೊ ಬಗ್ಗೆ ವಿಶೇಷ ತಜ್ಞತೆ ಪಡೆದ ಈತ 1907ರಲ್ಲಿ ಅದೇ ಸಂಸ್ಥೆಯಲ್ಲಿ ಪ್ರಾಧ್ಯಾಪಕನಾದ. ಹಂಗೇರಿಯ ಸಂಗೀತ ಮಾದರಿಗಳಿಂದ ಈ ದೇಶದ ಪ್ರಾಕ್ತನ ಸಂಗೀತ ಮಾದರಿಗಳ ಸಂಶೋಧನೆ ನಡೆಸಿದ. ಮಾಗ್‍ಯಾರ್, ರುಮೇನಿಯಾ, ಸ್ಲಾವೂಕ್ ಮುಂತಾದ ದೇಶಗಳಿಂದ ಆರುಸಾವಿರಕ್ಕೂ ಹೆಚ್ಚು ಜನಪದ ಗೀತೆಗಳನ್ನು ಸಂಗ್ರಹಿಸಿ ಸಂಸ್ಕರಿಸಿ ವೈಜ್ಞಾನಿಕವಾಗಿ ವಿಂಗಡಿಸಿದ. ಜೋಲ್‍ಟನ್ ಕೋಡ್ಲೆ ಎಂಬ ಸಂಗೀತ ವಿದ್ವಾಂಸನೊಡಗೂಡಿ 1911ರಲ್ಲಿ ಹಂಗೇರಿಯ ಸಂಗೀತ ಸಂಸ್ಥೆ ಸ್ಥಾಪಿಸಿದ. ತನ್ನೆಲ್ಲ ಸಂಗೀತ ಸಂಶೋಧನೆಯ ಫಲಶ್ರುತಿಯಾಗಿ 1924ರಲ್ಲಿ ಹಂಗೇರಿಯ ಜನಪದ ಸಂಗೀತ ಎಂಬ ಕೃತಿ ಪ್ರಕಟಿಸಿದ. ಈ ಶತಮಾನದ ಜನಪದ ಸಂಗೀತ ಮತ್ತು ತೌಲನಂ ಸಂಗೀತ ಶಾಸ್ತ್ರದ ಅಧ್ಯಯನಕ್ಕೆ ಈತನ ಕೊಡುಗೆ ಗಣನೀಯವಾದುದು. 									(ಎಚ್.ಎಸ್.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ